ಮ್ಯಾಕ್‍ಡೊನಾಲ್ಡ್, ಜೇಮ್ಸ್ ರ್ಯಾಮ್ಸೆ
1866-1937, ಗ್ರೇಟ್ ಬ್ರಿಟಿನ್ನಿನ ಲೇಬರ್ ಪಕ್ಷದ ಪ್ರಥಮ ಪ್ರಧಾನಿ. ಮ್ಯಾಕ್‍ಡೊನಾಲ್ಡ 1866 ಅಕ್ಟೋಬರ್ 12 ರಂದು ಸ್ಕಾಟ್‍ಲೆಂಡಿನ ಲಸೀವತಾತ್‍ನಲ್ಲಿ ಜನಿಸಿದ. ಪ್ರಾಥಮಿಕ ಶಿಕ್ಷಣ 12ನೆಯ ವಯಸ್ಸಿಗೆ ಮುಗಿಸಿ ಮುಂದೆ ಆರು ವರ್ಷಗಳ ಕಾಲ ಮಕ್ಕಳಿಗೆ ಪಾಠ ಹೇಳಿಕೊಂಡು ತಾನು ಕಲಿತ. ಪ್ರಯೋಗಾಲಯದಲ್ಲಿ ಕೆಲಸ ಮಾಡಿಕೊಂಡು ಸಂಜೆ ತರಗತಿಗಳಲ್ಲಿ ವ್ಯಾಸಂಗಮಾಡಿ ತನ್ನ ಜ್ಞಾನ ಮತ್ತು ವಿದ್ಯಾರ್ಹತೆಗಳನ್ನು ಬೆಳೆಸಿಕೊಂಡ. ಮುಂದೆ 1885ರಲ್ಲಿ ಬ್ರಿಸ್ಟಾಲ್‍ನಲ್ಲಿ ಕೆಲಸಕ್ಕೆ ಸೇರಿದ. ಅಲ್ಲಿ ಅವನಿಗೆ ಎಡಪಂಥೀಯ ವಿಚಾರಗಳ ಪರಿಚಯವಾಯಿತು. ಅನಂತರ ಲಂಡನ್ನಿಗೆ ಹೋಗಿ ಫೇಬಿಯನ್ ಸಂಘದ ಕಚೇರಿಯಲ್ಲಿ ನೌಕರನಾಗಿ ಸೇರಿದ. 1894ರಲ್ಲಿ ಹೊಸದಾಗಿ ಸ್ಥಾಪಿಸಿದ ಕಾರ್ಮಿಕ ಪಕ್ಷದ ಸದಸ್ಯವಾದ. ಈ ಪಕ್ಷವೇ ಮುಂದೆ ಲೇಬರ್ ಪಕ್ಷವಾಯಿತು. 1897ರಲ್ಲಿ ಕೆನಡ ಮತ್ತು ಸಂಯುಕ್ತಸಂಸ್ಥಾನಗಳಿಗೂ 1906ರಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‍ಗಳಿಗೂ ಭೇಟಿಯಿತ್ತ. ಕಾರ್ಮಿಕ ಪ್ರಾತಿನಿಧ್ಯ ಸಮಿತಿಯ ವತಿಯಿಂದ ಕಾಮನ್ಸ್ ಸಭೆಗೆ 1906ರಲ್ಲಿ ಸ್ಪರ್ಧಿಸಿ ಗೆದ್ದ. ಇವನೊಂದಿಗೆ ಈ ಪಕ್ಷದ ಇತರ 28 ಮಂದಿ ಆರಿಸಿ ಬಂದರು.

1910ರಲ್ಲಿ ಈತ ಭಾರತಕ್ಕೆ ಭೇಟಿ ಕೊಟ್ಟ. ಮತ್ತೆ ಸಿವಿಲ್ ಸೇವೆಯ ಬಗ್ಗೆ ರಾಯಲ್ ಕಮಿಷನ್ನಿನ ಸದಸ್ಯನಾಗಿ 1913 ಮತ್ತು 1914ರಲ್ಲಿ ಭಾರತಕ್ಕೆ ಬಂದ. ಎರಡನೆಯ ಅಂತಾರಾಷ್ಟ್ರೀಯ ಸಮಾಜವಾದಿ ಸಮಾವೇಶದಲ್ಲಿ ಭಾಗವಹಿಸಿದ. 1911ರಲ್ಲಿ ಕಾಮನ್ಸ್ ಸಭೆಯಲ್ಲಿ ಲೇಬಸರ್ ಪಕ್ಷದ ನಾಯಕ. ಒಂದನೆಯ ಮಹಾಯುದ್ಧದಲ್ಲಿ ಬ್ರಿಟಿನ್ ಪಾಲ್ಗೊಳ್ಳುವುದನ್ನು ವಿರೋಧಿಸಿದ. ತನ್ನ ನಿಲುವಿಗೆ ಜಯ ದೊರೆಯದಿದ್ದರೂ ವಿಚಲಿತನಾಗದೆ ಅದನ್ನು ಸಮರ್ಥಿಸುತ್ತಿದ್ದ. 1918ರ ಚುನಾವಣೆಯಲ್ಲಿ ಲೈಸೆಸ್ಟರ್‍ನಿಂದ ಕಾಮನ್ಸ್ ಸಭೆಗೆ ಸ್ಪರ್ಧಿಸಿ ಸೋತ. ಮತ್ತೆ 1922ರಲ್ಲಿ ಪಾರ್ಲಿಮೆಂಟಿಗೆ ಚುನಾಯಿತನಾಗಿ ವಿರೋಧ ಪಕ್ಷದ ನಾಯಕನಾದ. ಆಗ ಲೇಬರ್ ಪಕ್ಷದ 140 ಮಂದಿ ಗೆದ್ದಿದ್ದು ಎರಡನೆಯ ಸ್ಥಾನದಲ್ಲಿತ್ತು.

ಚಿಂತನಶೀಲ ಲೇಖಕನಾಗಿ ಮ್ಯಾಕ್‍ಡೊನಾಲ್ಡ 1919ರಲ್ಲಿ ಸಿಂಡಿಕಲಿಸಮ್ ಎಂಬ ಕೃತಿಯನ್ನೂ ತರುವಾಯ ಪಾರ್ಲಿಮೆಂಟ್ ಅಂಡ್ ರೆವಲ್ಯೂಷನ್ ಮತ್ತು ಪಾರ್ಲಿಮೆಂಟ್ ಅಂಡ್ ಡೆಮಾಕ್ರಸಿ ಎಂಬ ಕೃತಿಗಳನ್ನು ಪ್ರಕಟಿಸಿದ 1923ರಲ್ಲಿ ನಡೆದ ದಿಢೀರ್ ಚುನಾವಣೆಯಲ್ಲಿ ಈತನ ಪಕ್ಷದ 192 ಅನುಯಾಯಿಗಳು ಗೆದ್ದು. ಬಂದರು ಆಗ ಈತ ಲಿಬರಲ್ ಪಕ್ಷದ ಬೆಂಬಲದಿಂದ ರಾಷ್ಟ್ರದ ಆಡಳಿತ ಸೂತ್ರ ಹಿಡಿಯುವಲ್ಲಿ ಯಶಸ್ವಿಯಾಗಿ 1924 ಜನವರಿ 22 ರಂದು ಗ್ರೇಟ್ ಬ್ರಿಟನ್ನಿನ ಪ್ರಧಾನಮಂತ್ರಿಯಾದ.

ಮ್ಯಾಕ್‍ಡೋನಾಲ್ಡ್ ಪ್ರಧಾನಮಂತ್ರಿಯಾದ ಮೇಲೆ ವಿದೇಶಾಂಗ ನೀತಿಯ ಸುಧಾರಣೆಗೆ ಪ್ರಯತ್ನಿಸಿದ. ಫ್ರಾನ್ಸ್ ಮತ್ತು ಜರ್ಮನಿಗಳ ಸಂಬಂಧಗಳನ್ನು ಉತ್ತಮಗೊಳಿಸಲು ಯತ್ನಿಸಿದ. ಇವನ ಆಳ್ವಿಕೆಯಲ್ಲಿ ಸೋವಿಯತ್ ರಷ್ಯಕ್ಕೆ ಗ್ರೇಟ್ ಬ್ರಿಟನ್ ಮಾನ್ಯತೆ ನೀಡಿತು. 1924 ಅಕ್ಟೋಬರ್ 2 ರಂದು ಲೀಗ್ ಆಫ್ ನೇಷನ್ಸದ ಸಭೆಯಲ್ಲಿ ಭದ್ರತೆ ಮತ್ತು ನಿಶ್ಯಸ್ತ್ರಿಕರಣಕ್ಕೆ ಕರೆ ಕೊಡುವ ಘೋಷಣೆಯ ಅಂಗೀಕಾರಕ್ಕೆ ಬ್ರಿಟನ್ ಪ್ರಯತ್ನಿಸಿತು. ಐರ್ಲೆಂಡಿನೊಡನೆ ಒಡಂಬಡಿಕೆ ಮಾಡಿಕೊಂಡಕು ಹಿಂಸಾಚಾರಕ್ಕೆ ಬೆದರಿಕೆಯನ್ನು ನಿವಾರಿಸಲಾಯಿತು. ಆದರೆ ಈತ ರಷ್ಯದತ್ತ ಒಲವಿರುವ ವ್ಯಕ್ತಿಯೆಂಬ ಪ್ರಚಾರಕ್ಕೆ ಬಲಿಯಾಗಿ ಕಾಮನ್ಸ್ ಸಭೆಯಲ್ಲಿ ಸರ್ಕಾರದ ವಿರುದ್ಧ ಬಿದ್ದ ಮತಗಳ ಕಾರಣ 1924 ನವೆಂಬರ್ 4ರಂದು ರಾಜೀನಾಮೆ ನೀಡಿದ. ಆದರೆ ಪಕ್ಷದಲ್ಲಿ ಈತನ ನಾಯಕತ್ವ ಅಬಾಧಿತವಾಗುಳಿಯಿತು.

1929ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷ 290 ಸ್ಥಾನಗಳನ್ನು ಗೆದ್ದು ಗೊಂಡಿತು. ಲಿಬರಲ್ ಪಕ್ಷದ ಬೆಂಬಲದಿಂದ ಮ್ಯಾಕ್‍ಡೊನಾಲ್ಡ 1929 ಜೂನ್ 5 ರಂದು ಎರಡನೆಯ ಬಾರಿಗೆ ಪ್ರಧಾನಮಂತ್ರಿಯಾದ. ಬ್ರಿಟನ್ ಈತನ ಅಧಿಕಾರಾವಧಿಯಲ್ಲಿ ವಿದೇಶಾಂಗ ನೀತಿಯಲ್ಲಿ ಗಣನೀಯ ಯಶಸ್ಸು ಪಡೆಯಿತು. ಈತ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಭೇಟಿ ನೀಡಿ ಆಂಗ್ಲೊ-ಅಮೆರಿಕ ನೌಕಾ ಪರಿಮಿತಿ ಕೌಲಿಗೆ ಸಮಾಲೋಚನೆ ನಡೆಸಿದ. ರಷ್ಯದೊಂದಿಗೆ ಸಾಮಾನ್ಯ ಸಂಬಂಧಗಳನ್ನು ಸ್ಥಾಪಿಸಿದ. ಪ್ರಾನ್ಸ್ ಮತ್ತು ಇಟಲಿಗಳೊಂದಿಗೆ ಅನೇಕ ವಿಷಯಗಳಲ್ಲಿ ಒಪ್ಪಂದಕ್ಕೆ ಬರಲಾಯಿತು. ಜರ್ಮನಿಯ ಆಕ್ರಮಣಕಾರಿ ನೀತಿಯನ್ನು ತಡೆಯಲು ಅದರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳಲಾಯಿತು. ಮುಂದೆ 1930-31ರ ವಿಶ್ವವ್ಯಾಪ್ತಿ ಆರ್ಥಿಕ ಕುಸಿತ ಬ್ರಿಟಿನ್ನಿನ ಅನೇಕ ಆರ್ಥಿಕ ಸಮಸ್ಯೆಗಳನ್ನು ತಂದೊಡ್ಡಿತು. ನಿರುದ್ಯೋಗ ಸಮಸ್ಯೆ ಉಲ್ಬಣಿಸಿತು. 1931ರಲ್ಲಿ ಮ್ಯಾಕ್‍ಡೊನಾಲ್ಡ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಮತ್ತೆ ರಾಷ್ಟ್ರೀಯ ಸರ್ಕಾರವನ್ನು ರಚಿಸಿ ಇತರ ಪಕ್ಷಗಳ ಬೆಂಬಲದಿಂದ ಪ್ರಧಾನಿಯಾಗಿ ಮುಂದುವರಿದ. 1933ರ ವಿಶ್ವ ಆರ್ಥಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ. 1935 ಜೂನ್ 7 ರವರೆಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿ ಅನಂತರ ಸ್ಥಾನ ತ್ಯಜಿಸಿದ. ಮುಂದೆ ಈತ ಕೌನ್ಸಿಲ್ಲಿನ ಅಧ್ಯಕ್ಷನಾಗಿದ್ದು 1957 ಮೇ 28 ರಂದು ಈ ಸ್ಥಾನಕ್ಕೂ ರಾಜೀನಾಮೆ ನೀಡಿದ.

ಬ್ರಿಟಿನ್ನಿನ ಲೇಬರ್ ಪಕ್ಷದ ಏಳಿಗೆಯನ್ನು ಸಾಧಿಸಿ ಇತಿಹಾಸ ನಿರ್ಮಿಸಿದ. ಮ್ಯಾಕ್‍ಡೊನಾಲ್ಡ ದಕ್ಷಿಣ ಅಮೇರಿಕಕ್ಕೆ ಸಮುದ್ರಯಾನ ಕೈಗೊಂಡಿದ್ದಾಗ 1937 ನವೆಂಬರ್ 9 ರಂದು ದುರಂತಕ್ಕೀಡಾಗಿ ನಿಧನನಾದ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ